ಕೇಲ್ಡಾಲ್ ವಿಧಾನ

ಆಗ್ರ್ಯಾನಿಕ್ ವಸ್ತುಗಳಲ್ಲಿರುವ ಸಾರಜನಕವನ್ನು ಪರಿಮಾಣಾತ್ಮಕವಾಗಿ ನಿರ್ಧರಿಸಲು ಬಳಸುವ ಒಂದು ವಿಧಾನ. ಪ್ರಥಮವಾಗಿ ಜೆ.ಕೇಲ್ಡಾಲ್ ಎಂಬಾತ ಅವಿಷ್ಕರಿಸಿದುದರಿಂದ (ಸು.1840) ಈ ಹೆಸರು ಬಂದಿದೆ. ಅತ್ಯಂತ ಅಲ್ಪ ಪರಿಮಾಣದಲ್ಲಿರುವ ಸಾರಜನಕವನ್ನು ಸಹ ಕರಾರುವಕ್ಕಾಗಿ ಅಳೆಯಲು ಸಾಧ್ಯವಿರುವುದರಿಂದ ಪ್ರೋಟೀನುಗಳಂಥ ಜೈವಿಕವಸ್ತುಗಳಲ್ಲಿರುವ ಸಾರಜನಕವನ್ನು ನಿರ್ಧರಿಸಲು ಈ ವಿಧಾನವನ್ನು ಪ್ರಯೋಗಶಾಲೆಯಲ್ಲಿ ಅಧಿಕವಾಗಿ ಬಳಸಲಾಗುತ್ತಿದೆ. ಇದನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು. 1.ವಿಶ್ಲೇಷಿತ ಆಗ್ರ್ಯಾನಿಕ್ ವಸ್ತುವನ್ನು ಸಾರ ಸಲ್ಫ್ಯೂರಿಕ್ ಆಮ್ಲದಿಂದ ಉತ್ಕರ್ಷಿಸಲಾಗುವುದು. ಕಾಪರ್ ಸಲ್ಫೇಟ್ ಮತ್ತು ಪೊಟ್ಯಾಸಿಯಂ ನೈಟ್ರೇಟುಗಳ ಮಿಶ್ರಣವನ್ನು ಅಥವಾ ಮಕ್ರ್ಯುರಿಕ್ ಆಕ್ಸೈಡನ್ನು (ಪಾದರಸದ ಆಕ್ಸೈಡನ್ನು) ಅಥವಾ ಸೆಲೆನಿಯಂ ಆಕ್ಸೈಡನ್ನು ವೇಗ ವರ್ಧಕಗಳನ್ನಾಗಿ ಬಳಸುತ್ತಾರೆ. ಆಗ್ರ್ಯಾನಿಕ್ ವಸ್ತು (ಉದಾ:ಪ್ರೋಟೀನ್) ಮತ್ತು ಸಲ್ಫ್ಯೂರಿಕ್ ಆಮ್ಲಗಳ ಮಿಶ್ರಣಗಳನ್ನು ಕುದಿಸಿದಾಗ ಇಂಗಾಲ ಮತ್ತು ಜಲಜನಕಗಳು ಅನುಕ್ರಮವಾಗಿ ಇಂಗಾಲದ ಡೈಆಕ್ಸೈಡ್ ಮತ್ತು ನೀರಿನ ರೂಪದಲ್ಲಿ ಹೊರಬೀಳುತ್ತವೆ. ಸಾರಜನಕ ಅಮೋನಿಯ ಆಗಿ ಪರಿವರ್ತನೆಯಾಗಿ ಸಲ್ಫ್ಯೂರಿಕ್ ಆಮ್ಲದೊಂದಿಗೆ ವರ್ತಿಸಿ ಅಮೋನಿಯಂ ಸಲ್ಫೇಟನ್ನು ಉತ್ಪತ್ತಿಮಾಡುತ್ತದೆ. ಈ ಪರಿವರ್ತನೆ ಪರಿಮಾಣಾತ್ಮಕವಾಗಿ ನಡೆಯುತ್ತದೆ. ಇಂಗಾಲ ಪೂರ್ಣವಾಗಿ ಉತ್ಕರ್ಷಣೆಯಾಗುವವರೆಗೆ ಮಿಶ್ರಣವನ್ನು ಕಾಸಬೇಕು. ಈ ಘಟ್ಟದಲ್ಲಿ ಮಿಶ್ರಣ ತಿಳಿಯಾಗುತ್ತದೆ. ಮತ್ತು ಎಲ್ಲ ಸಾರಜನಕಾಂಶವೂ ಅಮೋನಿಯ ಆಗಿ ಪರಿವರ್ತನೆಯಾಗುತ್ತದೆ. ಇದಕ್ಕೆ ಕೆಲಗಂಟೆಗಳು ಬೇಕಾಗಬಹುದು.
ಎರಡನೆಯ ಹಂತದಲ್ಲಿ ಅಮೋನಿಯಂ ಸಲ್ಫೇಟಿಗೆ ಸಾರಪ್ರತ್ಯಾಮ್ಲವನ್ನು (40% ಸೋಡಿಯಂ ಹೈಡ್ರಾಕ್ಸೈಡ್) ಹೆಚ್ಚಿನ ಪರಿಮಾಣದಲ್ಲಿ ಸೇರಿಸಿ, ನೀರಿನ ಆವಿಯಿಂದ ಕಾಸಿದಾಗ ಅಮೋನಿಯ ಹೊರಬಿದ್ದು ಆವಿಯೊಡನೆ ಬರುತ್ತದೆ. ಇದನ್ನು ಶಿಷ್ಟ ಸಾರರಿಕ್ತ ಸಲ್ಫ್ಯೂರಿಕ್ ಆಮ್ಲದಲ್ಲಿ ಅಥವಾ 2% ಬೋರಿಕ್ ಆಮ್ಲದಲ್ಲಿ ವಿಲೀನಮಾಡಿ ಅನುಮಾಪನ (ಟೈಟ್ರೇಷನ್) ಕ್ರಮದಿಂದ ಪರಿಮಾಣ ನಿರ್ಧರಣೆಯನ್ನು ಮಾಡಬಹುದು.

ಕೇಲ್ಡಾಲ್ ವಿಧಾನವನ್ನು ಅನೇಕ ವಿಧದಲ್ಲಿ ಮಾರ್ಪಡಿಸಲಾಗಿದೆ. ಇವುಗಳಲ್ಲಿ ಅತಿಮುಖ್ಯವಾದ ಪ್ರೆಹ್ಲ್‍ರ್‍ವರ ಮಾರ್ಪಾಡಿನಲ್ಲಿ ಪಾರ್ನಾಸ್-ವ್ಯಾಗ್ನರ್‍ರವರ ಕಿರು ಬಾಷ್ಪೀಕರಣ ಸಲಕರಣೆಯನ್ನೂ ಸೂಕ್ಷ್ಮ ಬ್ಯೂರೆಟ್ಟನ್ನೂ ಬಳಸಲಾಗಿದೆ. ಇದರಿಂದ 0.10 ಮಿಲಿಗ್ರಾಂ ಮತ್ತು ಅದಕ್ಕಿಂತ ಅಲ್ಪವಾದ ಪ್ರಮಾಣದಲ್ಲಿರುವ ಸಾರಜನಕವನ್ನು ಸಹ ನಿರ್ಧರಿಸಬಹುದು.

ಅಮೋನಿಯ ಅನಿಲವನ್ನು ನೇರವಾಗಿ ನೆಸ್ಲರಿನ ಅಭಿಕರ್ಮಕದೊಂದಿಗೆ (ರೀಏಜೆಂಟ್) ಸಂಸ್ಕರಿಸುವ ವಿಧಾನವೂ ಆಚರಣೆಯಲ್ಲಿದೆ. ಈ ಕ್ರಿಯೆಯಲ್ಲಿ ಹಳದಿ ಅಥವಾ ಹಳದಿಮಿಶ್ರಿತ ನಸುಕಿತ್ತಳೆಬಣ್ಣ ರಚಿತವಾಗುತ್ತದೆ. ಬಣ್ಣದ ಗಾಢತೆಯನ್ನು ಸ್ಪೆಕ್ಟ್ರೋಫೋಟೋಮೀಟರಿನಲ್ಲಿ ಅಳೆಯಲಾಗುತ್ತದೆ. ಈ ಕ್ರಿಯೆ ಅತ್ಯಂತ ಸೂಕ್ಷ್ಮವಾದದ್ದು ಮತ್ತು ತ್ವರಿತವಾಗಿ ನಡೆಸಬಹುದಾದದ್ದು. ಅಮೋನಿಯ ನೆಸ್ಲರ್ ಅಭಿಕರ್ಮಕದ ಮಕ್ರ್ಯುರಿಕ್ ಅಯೊಡೈಡಿನೊಂದಿಗೆ ಈ ರೀತಿ ವರ್ತಿಸುತ್ತದೆ: 

NH4OH + 2(HgI2.2KI) + 3KOH          NHg2I + 7KI + 4H2O.

ಡೈಮಕ್ರ್ಯುರಿಕ್ ಅಮೋನಿಯಂ ಅಯೊಡೈಡ್ (ಓಊg2I) ಒಂದು ಕಲಿಲವಸ್ತು. ಆದ್ದರಿಂದ ಈ ಪ್ರತಿಕ್ರಿಯೆಯನ್ನು ಎಚ್ಚರಿಕೆಯಿಂದ ಪೂರ್ವಭಾವಿಯಾಗಿ ಶಿಷ್ಟಗೊಳಿಸಬೇಕು.                            
 (ಎಚ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ